ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಒಂದು ಗ್ರಾಮ, ಹೋಬಳಿ ಕೇಂದ್ರ.  ತರೀಕೆರೆ-ನರಸಿಂಹರಾಜಪುರ ಮಾರ್ಗದಲ್ಲಿ ತರೀಕೆರೆಯ ವಾಯವ್ಯಕ್ಕೆ 14 ಕಿಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಸಮೀಪದಲ್ಲಿ ಭದ್ರಾನದಿಗೆ ಜಲಾಶಯ ನಿರ್ಮಿಸಲಾಗಿದೆ. ಒಂದನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 40.81 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಜಲಾಶಯದ ಅಣೆಕಟ್ಟೆಯನ್ನು ಕಲ್ಲುಗಾರೆಯಿಂದ ಕಟ್ಟಿದೆ. ಇದರ ಉದ್ದ 440 ಮೀ, ಎತ್ತರ 59 ಮೀ. ಜಲಾನಯನ ಪ್ರದೇಶ 103.5 ಚ.ಕಿಮೀ. ಈ ಜಲಾಶಯ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಸರಹದ್ದಿನಲ್ಲಿದ್ದು ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ನೀರೊದಗಿಸುತ್ತದೆ. ಈ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದಿರುವ ಒಟ್ಟು ಪ್ರದೇಶ 99,010 ಹೆಕ್ಟೇರು. ಭದ್ರಾ ಯೋಜನೆಯಲ್ಲಿ 315 ಲಕ್ಷ ರೂಪಾಯಿ ಅಂದಾಜು ವೆಚ್ಚದ ವಿದ್ಯುತ್ ಉತ್ಪಾದನಾ ಯೋಜನೆಯೂ ಸೇರಿದೆ.  ಇದರಿಂದ 25 ಸಾವಿರ ಕಿಲೊವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಈ ಜಲಾಶಯದ ಎದುರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಿ (1973) ಅನಂತರ ಕುವೆಂಪು ವಿಶ್ವವಿದ್ಯಾಲಯವಾಯಿತು (1987).	
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ